ಭಾರತೀದಾಸನ್
1891-1964. ಕ್ರಾಂತಿಕವಿ, ನಾಟಕಕಾರ, ಸಂಗಿತಗಾರ. ಪುಮಚ್ಚೇರಿಯಲ್ಲಿ ಜನನ (29-4-1891). ನಿಜನಾಮ ಕನಕ ಸುಬ್ಬರತ್ನಂ. ತಂದೆ ಕನಕ ಸಭೈ. ಭಾರತೀದಾಸನ್ ಕೆಲವು ಕಾಲ ಫ್ರೆಂಚ್ ಶಾಲೆ ಹಾಗೂ ತಮಿಳು ಶಾಲೆಗಳಲ್ಲಿ ಓದಿದರು. ಬಾಲ್ಯದಿಂದಲೇ ಜಾತಿವೈಷಮ್ಯ, ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಹದಿನೆಂಟನೆಯ ವಯಸ್ಸಿನಲ್ಲಿ ಪುದುಚೇರಿಯ ಶಾಲೆಯೊಂದರಲ್ಲಿ ತಮಿಳು ಅಧ್ಯಾಪಕರಾದರು. ಅರವಿಂದರು, ವೆ. ಸು. ಅಯ್ಯರ್, ಸುಬ್ರಹ್ಮಣ್ಯ ಭಾರತಿ ಮೊದಲಾದವರ ಸಂಪರ್ಕದಿಂದ ಇವರಲ್ಲಿ ಹೊಸತನ, ಹೊಸ ಅರಿವು ಮೂಡಿದುವು. ಭಾರತಿಯವರ ತೀವ್ರ ಪ್ರಭಾವಕ್ಕೊಳಗಾಗಿ ಅವರಿಂದ ಪ್ರಶಂಸೆ ಪಡೆದು ಭಾರತೀದಾಸನ್ ಎಂಬ ಹೆಸರು ಇಟ್ಟುಕೊಂಡರು. ತಮಿಳು ಅಧ್ಯಾಪಕರಾಗಿಯೂ ಪತ್ರಿಕಾ ಸಂಪಾದಕರಾಗಿಯೂ ದುಡಿದ ಇವರಿಗೆ ಕೆಲವು ರಾಜಕೀಯ ಪಕ್ಷಗಳ ಸಂಪರ್ಕವೂ ಇತ್ತು. ಸಿನಿಮಾ ಕ್ಷೇತ್ರದಲ್ಲೂ ಕೆಲಸಮಾಡಿದ್ದಾರೆ. ಕ್ರಾಂತಿ ಕವಿ (ಪುರಟ್ಟಿ ಕವಿಜ್ಞಾರ್) ಎಂದು ಹೆಸರಾದ ಇವರು ತಮಿಳಿನಲ್ಲಿ ಸುಬ್ರಹ್ಮಣ್ಯ ಭಾರತಿಯವರ ಅನಂತರ ಹೆಚ್ಚು ಪ್ರಸಿದ್ಧರಾದರು. ಭಾರತಿಯವರನ್ನು ಅನುಕರಿಸಿ ಬರೆದ ಇವರ ಮೊದಲ ಕವನ ಸಂಕಲನ ಭಾರತೀದಾಸನ್ ಕವಿತೈಗಳ್ 1938ರಲ್ಲಿ ಪ್ರಕಟವಾಯಿತು. ಪಾಂಡಿಯನ್ ಪರಿಶು (ಪಾಂಡ್ಯನ ಬಹುಮಾನ), ತಮಿಳಚ್ಚಿಯಿನ್ ಶಕ್ತಿ (ತಮಿಳಿತಿಯ ಶಕ್ತಿ), ವೀರತ್ತಾಯ್ (ವೀರಮಾತೆ), ಎದಿರ್ ಪಾರಾದ ಮುತ್ತಮ್ (ಎದಿರುನೋಡದ ಮುತ್ತು), ಕಾದಲಾ ಕಡಮೈಯಾ (ಪ್ರೇಮವೋ ಕರ್ತವ್ಯವೋ), ಕಡಲ್‍ಮೇ¿õï ಕುಮಿಳಿಗಳು (ಕಡಲ ಮೇಲಿನ ನೊರೆಗಳು), ಕು¾ಂಜಿತ್ತಿಟ್ಟು (ಗುಡ್ಡ ಪ್ರದೇಶ), ನಲ್ಲಿ ಮುತ್ತುಕ್ಕತೈ (ನಲ್ಲಿಮುತ್ತುವಿನ ಕಥೆ), ಕಟುಂಬವಿಳಕ್ಕು (ಕುಟುಂಬದ ಬೆಳಕು), ಇರುಂಡ ವೀಡು (ಕತ್ತಲೆಮನೆ), ಅಂ¿ನ್ ಸಿರಿಪ್ಟು (ಚೆಲುವಿನ ನಗೆ)_ಇವು ಇವರ ಕವನ ಸಂಕಲನಗಳು. ಇಂಪಾಗಿ ಹಾಡಬಹುದಾದ ಇವರ ಕವನಗಳು ಸರಳವೂ ಭಾವಪೂರ್ಣವೂ ಆಗಿವೆ. ತಮಿಳಿನಲ್ಲಿ ಪರಂಪರೆಯಾಗಿ ಬಂದಿರುವ ಹಳೆಯ ಛಂದಸ್ಸನ್ನೂ ನಾಡ ಪದಗಳಲ್ಲಿ ಬಳಕೆಯಲ್ಲಿರುವ ಚಿನ್ದು ಮೊದಲಾದ ಮಟ್ಟುಗಳನ್ನೂ ಉಪಯೋಗಿಸಿಕೊಂಡು ಸಂಗೀತಕ್ಕಾಗಿ ಹಾಡುಗಳನ್ನು ರಚಿಸಿದ್ದಾರೆ. ಕೆಲವು ನವ್ಯರೀತಿಯ ಕವನಗಳನ್ನೂ ಬರೆದಿದ್ದಾರೆ. ತಮಿಳು ಇಯಕ್ಕಂ (ತಮಿಳು ಚಳವಳಿ) ಎನ್ನುವ ಕವನ ಸಂಕಲನದಲ್ಲಿ ಎಲ್ಲರೂ ಸಮಾನರು ಸರ್ವಸ್ವಾಮಿತ್ವ ಎಲ್ಲರಿಗೂ ಸೇರಿದ್ದು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವರಲ್ಲದೆ ತಮಿಳು ಭಾಷೆ ಹಾಗೂ ನಾಡಿನ ಅಭಿಮಾನವನ್ನು ಜನರಲ್ಲಿ ಜಾಗೃತಗೊಳಿಸಿದ್ದಾರೆ. ಗೀತನಾಟಕಗಳನ್ನೂ ರಚಿಸಿದ್ದಾರೆ. ಇವರು ಬರೆದ ಗದ್ಯ ಜಾಗೃತಗೊಳಿಸಿದ್ದಾರೆ. ಗೀತನಾಟಕಗಳನ್ನೂ ರಚಿಸಿದ್ದಾರೆ. ಇವರು ಬರೆದ ಗದ್ಯ ನಾಟಕಗಳಲ್ಲಿ ಪಡಿತ್ತ ಪೆಣ್‍ಗಳ (ಕಲಿತ ಹೆಂಗಸರು), ಚೇರತಾಂಡವಮ್ (ಚೇರರ ತಾಂಡವ) ಇರಣಿಯನ್ ಅಲ್ಲದು ಇಣೈಯಟ್ರ ವೀರನ್ (ಹಿರಣ್ಯ ಅಥವಾ ಅಸಮಾನವೀರ) ಮೊದಲಾದವು ಹೆಸರಿಸತಕ್ಕವು. ಪುದುಚೇರಿಯಿಂದ ಕುಯಿಲ್ (ಕೋಗಿಲೆ) ಎನ್ನುವ ಕವಿತಾ ಪತ್ರಿಕೆಯೊಂದನ್ನು ಇವರು ಪ್ರಕಟಿಸಿದ್ದರು. ಕೆಲವು ಉತ್ತಮವಾದ ಮಕ್ಕಳ ಕವಿತೆ ಬರೆದಿದ್ದಾರೆ. ತಮಿಳು ಸರ್ಕಾರ ಭಾರತೀದಾಸನ್‍ರ ಪ್ರತಿಭೆಗೆ ಮೆಚ್ಚಿ ಅವರಿಗೆ ಪುರಟ್ಟಿ ಕವಿತಞ್ಞರ್ (ಕ್ರಾಂತಿ ಕವಿ) ಮತ್ತು ಪಾವೇಂದರ್ (ಕವಿಗಳ ರಾಜ) ಎಂಬ ಬಿರುದು ನೀಡಿ ಗೌರವಿಸಿತು. ತಮಿಳುನಾಡು, ನುಡಿ, ಜನವನ್ನು ಕುರಿತ ಭಾವಾವೇಶ ಇವರ ಕವನಗಳಲ್ಲಿ ಕಂಡುಬಂದರೂ ಜಾತಿ, ಮತ, ಕುಲ, ವರ್ಗ, ಬಣ್ಣ, ನಾಡು ಮೊದಲಾದ ಎಲ್ಲ ಭೇಧಗಳನ್ನೂ ತೊರೆದು ನೋಡುವ ದೃಷ್ಟಿಯನ್ನು ಇವರು ಸೊಗಸಾಗಿ ಚಿತ್ರಿಸಿದ್ದಾರೆ. ಇವರು 1964 ಏಪ್ರಿಲ್ 21ರಂದು ಮದರಾಸಿನಲ್ಲಿ ಕಾಲವಾದರು.										
	(ಎಸ್.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ